ಬಾಳಪ್ಪ ಹುಕ್ಕೇರಿ
(1911-2005) ಪ್ರಸಿದ್ಧ ಜಾನಪದ ಕವಿ ಗಾಯಕ. ಗಾಯನ ಪ್ರತಿಭೆಯನ್ನು ಸ್ವಾತಂತ್ರ್ಯ ಚಳವಳಿಯ ಅಸ್ತ್ರವನ್ನಾಗಿ ಬಳಸಿದವರು; ಸ್ವಾತಂತ್ರ್ಯಾನಂತರ ಸಂಗೀತವನ್ನು ಸಮಾಜ ಕಲ್ಯಾಣಕ್ಕಾಗಿ ದುಡಿಸಿಕೊಂಡು ಯಶಸ್ಸು ಸಾಧಿಸಿದವರು. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲ್ಲೂಕಿನ ಮರಗೋಡು ಗ್ರಾಮದಲ್ಲಿ ತಾಯಿ ಚೆನ್ನವೀರಮ್ಮ ಜನಪದ ಗಾಯಕಿ ತಂದೆ ವೀರಭದ್ರಪ್ಪ ಸಂಗೀತಾಭಿಮಾನಿ. ದೊಡ್ಡಪ್ಪ ಸಂಗೀತಗಾರರು ಹುಟ್ಟಿನಿಂದಲೇ ಬಂದ ಗಾಯನ ಪ್ರತಿಭೆಗೆ ತಾಯಿಯ ಮಡಿಲಲ್ಲೇ ಗಾಯನದ ದೀಕ್ಷೆ, ನೆರೆಮನೆಯ ಶಿವಲಿಂಗಯ್ಯನವರಿಂದ ಬಾಳಪ್ಪನವರಿಗೆ ಸಂಗೀತದಲ್ಲಿ ಮಾರ್ಗದರ್ಶನ, ಮುರಗೋಡದಲ್ಲಿ ಆಗ ಕಲಾವಿದರ ಹಿಂಡೇ ಬೀಡು ಬಿಟ್ಟಿತ್ತು. ಎಳೆತನದಲ್ಲೇ ಬೆಳೆದದ್ದು ಸಂಗೀತಮಯ ವಾತಾವರಣದಲ್ಲಿ, ಐದನೆ ತರಗತಿಗೆ ವಿದ್ಯಾಭ್ಯಾಸ ನಿಲುಗಡೆ. ಕಡು ಬಡತನದ ಕಾರಣ ಹಾಡಿನಿಂದ ಹೊಟ್ಟೆ ಹೊರೆಯಲಾಗಲಿಲ್ಲ. ಉದರ ನಿಮಿತ್ತ ಹಲವಾರು ವೇಷ, ಕಾಗದದ ಹೊಗಳನ್ನು ಮಾಡಿ ಮಾರಾಟ, ಐದು ಕಿಲೋಮೀಟರ್ ದೂರದ ಬೈಲಹೊಂಗಲ ಸಂತೆಗೆ ತಲೆಯ ಮೇಲೆ ಬೆಲ್ಲ ಹೊತ್ತುಕೊಂಡು ಹೋಗಿ ಮಾರಾಟಮಾಡಿದ್ದೂ ಉಂಟು.

	ಜನಪದ ಗೀತೆಗಳನ್ನು ತಾಯಿಯ ಮಡಿಲಿನಿಂದಲೇ ಕಲಿತ ಬಾಳಪ್ಪನವರಿಗೆ ಶಾಸ್ತ್ರೀಯ ಸಂಗೀತದ ಪಾಠವು ದೊರತಂತೆ ರಂಗಗೀತೆಗಳ ರುಚಿಯೂ ಲಭಿಸಿತು. ಜಾನಪದ ವಿವಿಧ ಹಾಡುಗಳ ಧಾಟಿಗಳ ಜೊತೆಗೆ, ಮರಾಠಿ ಅಭಂಗಗಳು, ಹಿಂದಿ ಭಜನೆಗಳು ಬಾಳಪ್ಪನವರನ್ನು ಪ್ರಭಾವೀಗೊಳಿಸಿದವು. ದನಿಯ ಆಲಾಪ ಪಲುಕುಗಳು ಹೊಸಬಗೆಯ ಗಾಯನಕ್ಕೆ ಆಧಾರವಾದವು. ಮಹಾತ್ಮಗಾಂಧಿಯವರ ಆದರ್ಶಕ್ಕೆ ತನ್ನನ್ನೇ ಅರ್ಪಿಸಿಕೊಂಡ ಬಾಳಪ್ಪ 1932ರಲ್ಲಿ ಮಹಾತ್ಮ ಸೇವಾ ಸಂಗೀತ ನಾಟಕ ಮಂಡಳಿ ಎಂಬ ನಾಟಕ ಕಂಪನಿ ತೆರೆದು 1940ರವರೆಗೆ ಸುಮಾರು ಎಂಟು ವರುಷಗಳ ಕಾಲ ಕಂಪನಿ ನಡೆಸಿದರು. ಆ ಎಂಟು ವರ್ಷಗಳ ಕಾಲ ಜನರಿಗೆ ಸ್ವಾತಂತ್ರ್ಯ ಚಳವಳಿಯ ಬಗೆಗೆ ಅರಿವನ್ನು ಮೂಡಿಸುವುದೇ ಬಾಳಪ್ಪನವರ ಮುಖ್ಯ ಗುರಿಯಾಗಿತ್ತು. ಗಾಯನವೇ ಪ್ರಮುಖ ಆಕರ್ಷಣೆಯಾಗಿದ್ದ ಆ ನಾಟಕಗಳ ಮೂಲಕ ಬಾಳಪ್ಪ ಹೊಸ ದಿಗಂತವನ್ನು ಆವಿಷ್ಕರಿಸಿದರು. 1940ರಲ್ಲಿ ಅವರ ನಾಟಕ ಕಂಪನಿ ಮುಚ್ಚಿತು. ಅದರೆ ಅವರಲ್ಲಿದ್ದ ಕೆಚ್ಚು, ಉತ್ಸಾಹ ಇಮ್ಮಡಿಯಾಯಿತು. 1941ರಿಂದ 1945ರವರೆಗೆ ಬಾಳಪ್ಪ ದೇಶದ ಮೂಲೆ ಮೂಲೆಗೂ ಸಂಚರಿಸಿ ತಮ್ಮ ಹಾಡುಗಾರಿಕೆಯ ಪ್ರತಿಭೆಯನ್ನು ಸ್ವಾತಂತ್ರ್ಯ ಚಳವಳಿಯ ಅಸ್ತ್ರವನ್ನಾಗಿ ಬಳಸಿ ಜನರನ್ನು ಎಚ್ಚರಿಸಿದರು. ಮರಾಠಿ, ಹಿಂದಿ, ಉರ್ದು, ಕನ್ನಡ ಭಾಷೆಗಳನ್ನು ಚೆನ್ನಾಗಿ ಅರಿತಿದ್ದ ಬಾಳಪ್ಪನವರು ಎಲ್ಲಾ ಭಾಷೆಗಳಲ್ಲೂ ಸ್ವಾತಂತ್ರ್ಯ ಗೀತೆಗಳನ್ನು ಹಾಡಿದರು; ಜನರನ್ನು ಬಡಿದೆಬ್ಬಿಸಿದರು. ಇದರ ಪರಿಣಾಮವಾಗಿ ಆಂಗ್ಲರ ಕೆಂಗಣ್ಣಿಗೆ ಗುರಿಯಾಗಿ 6 ತಿಂಗಳ ಕಾಲ ಕಾರಾಗೃಹವಾಸವನ್ನು ಅನುಭವಿಸಿದರು.

	ಸ್ವಾತಂತ್ರ್ಯ ದೊರೆಯುವವರೆಗೆ ಕೇವಲ ದೇಶಭಕ್ತಿಗೀತೆಗಳನ್ನು ಮಾತ್ರ ಹಾಡುತ್ತಿದ್ದರು. ಜನಪದ ಗೀತೆಗಳನ್ನು ಹಾಡುತ್ತಿರಲಿಲ್ಲ. ಅವರ ಕಾರ್ಯಕ್ರಮ ಕೇವಲ ಮನರಂಜನಾ ಕಾರ್ಯಕ್ರಮವಾಗಿರಲಿಲ್ಲ. ಸಂದೇಶವನ್ನು ದೇಶಭಕ್ತಿಯನ್ನು ಸಾರುವ ಮಂತ್ರಗಳಾಗಿದ್ದವು. ಇಂತಹ ಕಾರ್ಯಕ್ರಮವನ್ನು ಆಲಿಸಿದ ವ್ಯವಸಾಯ ಇಲಾಖೆಯ ಉಪನಿರ್ದೇಶಕರಾಗಿದ್ದ ವಿ.ಸಿ.ಪಾವಟಿ ಎಂಬುವರು ಬಾಳಪ್ಪನವರ ಮಾತಿನ ಮೋಡಿಗೆ, ಶೈಲಿಗೆ ಬೆರಗಾಗಿ, ವ್ಯವಸಾಯ ಇಲಾಖೆಯಲ್ಲಿ ಕ್ಷೇತ್ರ ಪ್ರಚಾರದ ಕೆಲಸಕ್ಕೆ ಆಹ್ವಾನಿಸಿದರು. ಬಡತನದ ನೋವಿನಲ್ಲೂ ಗಂಡುಗಲಿಯಾಗಿ, ದೇಶಭಕ್ತನಾಗಿ ಮೆರೆಯುತ್ತಿದ್ದ ಬಾಳಪ್ಪನವರಿಗೆ ಇದು ವರವಾಯಿತು. ಅವರ ಹೃದಯಾಂತರಾಳದ ವಿಚಾರಗಳಿಗೆ ಒಂದು ವೇದಿಕೆ ದೊರೆಯಿತು. ಕೃಷಿ ಇಲಾಖೆಯ ಪ್ರಚಾರಕರಾಗಿ 1943ರಿಂದ 1972ರವರೆಗೆ ರೈತರಿಗೆ ಒಕ್ಕಲುತನದ ವಿಷಯವಾದ ಬೀಜ, ಗೊಬ್ಬರ, ಕೃಷಿ, ವಿಧಾನ, ಆಧುನಿಕ ಬೇಸಾಯ ಪದ್ಧತಿಗಳ ಜೊತೆಗೆ, ಕುಟುಂಬ ಯೋಜನೆಯನ್ನು ಕುರಿತಾದ ಹಾಡುಗಳನ್ನು ರಚಿಸಿ, ಹಾಡಿ ರೈತರ ಪ್ರಗತಿ ಕಾರಣವಾದರು. ಸಂಗೀತವನ್ನು ಸಮಾಜಕ್ಕಾಗಿ ದುಡಿಸಿಕೊಂಡು ಯಶಸ್ಸು ಗಳಿಸಿದರು. 1962ರಲ್ಲಿ ಪಾಕಿಸ್ತಾನ ಚೀನಾ ಯುದ್ಧಗಳ ಸಮಯದಲ್ಲಿ ತಮ್ಮ ಗಾಯನದ ಮೂಲಕ ಜನರಲ್ಲಿ ಉತ್ಸಾಹ ತುಂಬಿದರು. ಅಷ್ಟೇ ಅಲ್ಲದೆ ತಮಗೆ ಕಾಣಿಕೆಯಾಗಿ ಬಂದ ಬೆಳ್ಳಿ-ಬಂಗಾರದ ಪದಕಗಳನ್ನು ಸೈನಿಕರ ನಿಧಿಗೆ ದಾನಮಾಡಿದರು.

	ಸ್ವಾತಂತ್ರ್ಯ ಬಂದ ನಂತರ ದೇಶಭಕ್ತಿ ಗೀತೆಗಳ ಜೊತೆಗೆ ಜಾನಪದ, ಸೋಬಾನೆ ಹಾಡುಗಳು, ಕುಟ್ಟುವ, ಬೀಸುವ, ಲಾವಣಿ, ದಾಂಪತ್ಯ ಪ್ರಧಾನ ಗೀತೆಗಳನ್ನು ಹಾಡುವುದರ ಜೊತೆಗೆ ಕನ್ನಡದ ಪ್ರಖ್ಯಾತ ಕವಿಗಳಾದ ಕುವೆಂಪು, ಬೇಂದ್ರೆ, ಕಣವಿ, ನರಸಿಂಹಸ್ವಾಮಿ, ಕಾವ್ಯಾನಂದ, ಆನಂದ ಕಂದ. ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ ಮುಂತಾದವರ ಹಾಡುಗಳಿಗೆ ಮಟ್ಟು ಕೂಡಿಸಿ ಹಾಡಲು ಪ್ರಾರಂಭಿಸಿದರು. ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಕಾವ್ಯಾನಂದರ ಮೊದಲು ಮಾನವನಾಗು ಬೇಂದ್ರೆಯವರ ಹುಬ್ಬಳ್ಳಿಯಾಂವ, ಕಡಕೋಳ ಮಡಿವಾಳಪ್ಪನವರ ತನ್ನ ತಾ ತಿಳಿದ ಮೇಲೆ - ಅನಂದಕಂದರ ಯಾತಕವ್ವಾ ಹುಬ್ಬಳ್ಳಿ ಧಾರವಾಡ - ಮುಂತಾದ ಗೀತೆಗಳು ಜನಜಾಗೃತಿ ಮೂಡಿಸಿದವು.

	ಹಿಂದೂಸ್ತಾನಿ ಸಂಗೀತ ಶೈಲಿಗೆ ವಚನಗಳನ್ನು ಸಂಯೋಜಿಸಿ ಹಾಡುವ ಪರಿಪಾಠವನ್ನು ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಪಂಚಾಕ್ಷರಿ ಗವಾಯಿ, ಮಲ್ಲಿಕಾರ್ಜುನ ಮನ್ಸೂರ್, ಸಿದ್ಧರಾಮ ಜಂಬಲದಿನ್ನಿ ಬಸವರಾಜ ರಾಜಗುರು ಮುಂತಾದವರು ಆಗಷ್ಟೇ ಪ್ರಾರಂಭಿಸಿದ್ದರು. ಇವರೆಲ್ಲರ ಸಂಯೋಜನೆಗಳಿಗಿಂತ ಭಿನ್ನವಾದ ಜಾನಪದ ಧಾಟಿಗಳ ಮೂಲಕ ವಚನಗಳಿಗೆ ಬಾಳಪ್ಪನವರು ಮಟ್ಟುಕೊಡಿಸಿದರು. ಸುಗಮಸಂಗೀತದ ಶೈಲಿಗೆ ವಚನಗಾಯನವನ್ನು ಅಳವಡಿಸಿದ್ದು ಇತಿಹಾಸವಾಯಿತು.

	ತನ್ನ ಹಾಡಿನ ಮೂಲಕ ಮಾತನಾಡುತ್ತ, ಸಾಮಾಜಿಕ, ಸಾಂಸ್ಕøತಿಕ ಚಳುವಳಿಯನ್ನು ಮಾಡಿದ, ಬಾಳಪ್ಪನವರಿಗೆ ದೊರೆತ ಬಿರುದುಗಳು ಪ್ರಶಸ್ತಿಗಳು ಹತ್ತಾರು. 1970ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, 1980-81ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1982ರಲ್ಲಿ ದಕ್ಷಿಣ ಹಿಂದೂಸ್ತಾನದ ಸಾಂಸ್ಕøತಿಕ ಸಂಸ್ಥೆ ತಿರುವಾಂಕೂರು (ಕೇರಳದ) ಪ್ರಶಸ್ತಿ, 1986ರಲ್ಲಿ ರಾಜ್ಯೋತ್ಸವ, 1989ರಲ್ಲಿ ಮಧ್ಯಪ್ರದೇಶ ಸರ್ಕಾರದ ತುಳಸಿ ಸಮ್ಮಾನ ಪ್ರಶಸ್ತಿ - ಮುಂತಾದ ಗೌರವಗಳು ಲಭಿಸಿದವು.

`ವಿಕಾಸಗೀತೆ `ಭಕ್ತಿಗೀತೆ ಗಳೆಂಬ ಎರಡು ಗೀತಸಂಕಲನಗಳನ್ನು ರಚಿಸಿ ಪ್ರಕಟಿಸಿದ ಬಾಳಪ್ಪನವರು ತಮ್ಮಲ್ಲಿ ಕವಿಯೊಬ್ಬ ಹುದುಗಿರುವುದನ್ನು ತೋರಿಸಿಕೊಟ್ಟರು. ಅಲ್ಲದೆ ಮೈಸೂರು ಅರಸರ ದರಬಾರಿನಲ್ಲಿ, ಭಾರತದ ಪ್ರಧಾನಿಯಾಗಿದ್ದ ಪಂಡಿತ್ ಜವಹರಲಾಲ್ ನೆಹರೂ ಅವರ ಮುಂದೆ, ರಾಷ್ಟ್ರಪತಿಯಾಗಿದ್ದ ಝಾಕೀರ್‍ಹುಸೇನ್, ರಾಜೇಂದ್ರಪ್ರಸಾದ್ ಅವರ ಮುಂದೆ ಹಾಡಿ ತಮ್ಮ ಗಾಯನ ಸಂಪತ್ತನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಜಾನಪದ ಗಾಯನವನ್ನು ಲೋಕ ಕಲ್ಯಾಣಕ್ಕೆ ಬಳಸಿದ ಬಾಳಪ್ಪ ........ ರಂದು ನಿಧನರಾದರು.	
(ಪಿ.ವಿ.ಎ.)
(ಪರಿಷ್ಕರಣೆ: ಜಯಶ್ರೀ ಅರವಿಂದ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ